ಮಂಗಳವಾರ, ನವೆಂಬರ್ 19, 2013

ಅಪರಿಚಿತ ದಾರಿಯಲ್ಲಿ ನನ್ನವಳನ್ನು ಹುಡುಕುತ್ತಾ ಹೊರಟೆ ಅವಳು ಬಿಟ್ಟುಹೋದ ಗುರುತನ್ನು ಹಿಡಿದು... ಅಯಾಸ ತೀರಿಸಲು ಅವಳ ನೆನಪುಗಳ ತಂಗುದಾಣವಿತ್ತು ಹಸಿವು ನೀಗಲು ಅವಳ ಮುಗುಳ್ನಗುವೇ ಆಧಾರವಾಗಿತ್ತು... ಅವಳ ಮುನಿಸು ದಾರಿಯಲ್ಲಿ ಅಡ್ಡಿಯಾದರೂ ಅವಳು ತೋರಿದ್ದ ಒಲವಿನ ದೀವಿಗೆ ಪಯಣವನ್ನು ಸುಗಮವಾಗಿಸಿತ್ತು.. ಮುಂದೆ ನನಗೆ ಹತಾಷೆ ಕಾದಿತ್ತು ತಲುಪುವ ಗಮ್ಯ ಬಹಳ ದೂರವಿತ್ತು ನಗುವಿನ ಬುತ್ತಿಯೂ ಖಾಲಿಯಾಗುತ್ತಿತ್ತು ನೆನಪಿನ ತಂಗುದಾಣವೂ ಎಲ್ಲೂ ಕಾಣದಂತಾಗಿತ್ತು... ಕೊನೆಗೂ ನಾನು ಸೋಲಲಿಲ್ಲ ಮನದಲ್ಲಿ ಚಿಗುರಿದ ಆಸೆಯ ಕುಡಿ ಬಾಡಲಿಲ್ಲ ದೂರದಲ್ಲಿ ಅವಳನ್ನು ಕಂಡಂತೆ ಭಾಸವಾಯಿತು ನನಗಾದ ಖುಷಿಗೆ ಮನವು ಕುಣಿಯುತ್ತಿತು.... ನನ್ನನ್ನು ನೋಡಿ ಆಕೆ ಅಚ್ಚರಿಗೊಂಡಳು ನನ್ನೆಡೆಗೆ ಓಡಿಬಂದು ನನ್ನನಪ್ಪಿ ಕಣ್ಣೀರಿಟ್ಟಳು ತಾನು ಮಾಡಿದ ತಪ್ಪಿಗೆ ತನ್ನನ್ನೇ ಬೈದುಕೊಂಡಳು ತಪ್ಪಿಗೆ ಪ್ರಾಯಶ್ಚಿತವಾಗಿ ನನ್ನೊಡನೆ ಬರಲೊಪ್ಪಿಕೊಂಡಳು... ಪರಿಚಿತವಾದ ದಾರಿಯಲ್ಲಿ ನನ್ನವಳ ಕೈ ಹಿಡಿದು ಹೊಸ ಹೊಸ ಆಸೆಗಳೊಂದಿಗೆ ಹೊಸ ಹುರುಪಿನಲಿ ಹರುಷದಿಂದ ಹೊರಟಿರುವೆ ಹೊಸ ಗುರಿಯೆಡೆಗೆ...